ಕೆಂಪೇಗೌಡ (ಭೈರವಿ)
ನಾಲ್ವಡಿ ಕೃಷ್ಣರಾಜ ಒಡೆಯರ ಆಸ್ಥಾನ ವಿದ್ವಾಂಸರಾಗಿದ್ದ ಪ್ರಸಿದ್ಧ ಸಂಗೀತಗಾರರು. ಇವರ ಜನನ ಮರಣಗಳ ಬಗ್ಗೆ ಯಾವ ಖಚಿತ ವಿವರವೂ ತಿಳಿಯದು. ಭೈರವಿ ರಾಗವನ್ನು ಆಲಾಪನೆ ಮಾಡುವುದರಲ್ಲಿಯೂ ಆ ರಾಗದಲ್ಲಿ ಪಲ್ಲವಿ ಮತ್ತು ಕೀರ್ತನೆಗಳನ್ನು ಹಾಡುವುದರಲ್ಲಿಯೂ ಅದ್ವಿತೀಯರಾಗಿದ್ದುದರಿಂದ ಇವರಿಗೆ ಭೈರವಿ ಕೆಂಪೇಗೌಡರು ಎಂದೇ ಹೆಸರಾಯಿತು. ಬೆಂಗಳೂರು ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕು ಬೇವೂರು ಗೌಡರ ಜನ್ಮಸ್ಥಳ. ಅಪ್ಪಟ ಬೇಸಾಯಗಾರ ಕುಟುಂಬವಾದ್ದರಿಂದ ಕೆಂಪೇಗೌಡರಿಗೆ ಸಂಗೀತ ದೈವದತ್ತ ಕಲೆಯಾಗಿ ಬಂದಂತೆ ಕಾಣುತ್ತದೆ. ಪ್ರಾರಂಭದಲ್ಲಿ ಹಳ್ಳಿಯ ಹಾಡುಗಳನ್ನು ಇವರು ರಾಗವಾಗಿ ಹಾಡುತ್ತಿದ್ದುದುಂಟು. ಯೌವನ ಪ್ರಾಪ್ತವಾಗಲು ಗೌಡರು ಮೈಸೂರಿಗೆ ಬಂದು ಅನೇಕ ಪ್ರಸಿದ್ಧ ಸಂಗೀತಗಾರರನ್ನು ಕಂಡು ತಮ್ಮನ್ನು ಶಿಷ್ಯನನ್ನಾಗಿ ಸ್ವೀಕರಿಸುವಂತೆ ಕೇಳಿದರೆಂದೂ ಶೂದ್ರರಾದ್ದರಿಂದ ಅವರಿಗೆ ಪಾಠ ಹೇಳಲು ಯಾರೂ ಒಪ್ಪಲಿಲ್ಲವೆಂದೂ ತಿಳಿದುಬರುತ್ತದೆ. ಕಡೆಗೆ ಅಭಿಮಾನಿಯೊಬ್ಬರ ಸಲಹೆಯ ಮೇರೆಗೆ ಗೌಡರು ತಮಿಳುನಾಡಿನ ಕೊಯಮತ್ತೂರಿಗೆ ಪ್ರಯಾಣ ಮಾಡಿ ಅಲ್ಲಿದ್ದ ತಮ್ಮ ಬಂಧುಗಳೊಡನೆ ಸಮಾಲೋಚನೆ ನಡೆಸಿ ಪಟ್ಟಂ ಸುಬ್ರಹ್ಮಣ್ಯ ಅಯ್ಯರ್ ಅವರ ಶಿಷ್ಯರಾದರು.

ತ್ಯಾಗರಾಜರ ಜನ್ಮಸ್ಥಳವಾದ ತಿರುವಾಯೂರಿನಲ್ಲಿ ಪಟ್ಟಂ ಅವರಂಥ ಗುರುಗಳು ದೊರೆತುದು ಕೆಂಪೇಗೌಡರ ಭಾಗ್ಯ. ಗೌಡರ ಜೊತೆಯಲ್ಲಿಯೇ ವಾಸುದೇವಾಚಾರ್ಯರೂ ಅಯ್ಯರ್ ಅವರಲ್ಲಿ ಸಂಗೀತ ಕಲಿತರೆಂದೂ ಅನಂತರ ಚಾಮರಾಜ ಒಡೆಯರ ಆಳ್ವಿಕೆಯ ಕಡೆಯ ದಿನಗಳಲ್ಲಿ ಆಸ್ಥಾನ ವಿದ್ವಾಂಸರಾಗಿ ಅರಮನೆ ಸೇರಿದರೆಂದೂ ತಿಳಿದುಬರುತ್ತದೆ. ಶಿಷ್ಯನ ಪಾತ್ರಾಪಾತ್ರತೆಯನ್ನು ತಿಳಿಯುವ ಸಲುವಾಗಿ ಗುರುಗಳು ಗೌಡರಿಗೆ ತಮ್ಮ ಹಸುಕಾಯುವ ಕೆಲಸ ವಹಿಸಿದರಂತೆ. ಸದಾ ಘನ ವಿದ್ವಾಂಸರಿಂದ ತುಂಬಿರುತ್ತಿದ್ದ ಗುರುಗೃಹದಲ್ಲಿ ಅಪೂರ್ವ ರಾಗಸಂಯೋಜನೆ, ಚರ್ಚೆ ಮತ್ತು ಕಛೇರಿಗಳು ನಿರಂತರವಾಗಿ ನಡೆಯುತ್ತಿದ್ದುವಾದ್ದರಿಂದ ಈ ಎಲ್ಲವನ್ನೂ ಹೊರನಿಂತು ಕೇಳುವ ಅವಕಾಶ ಗೌಡರಿಗೆ ದೊರೆತುದೊಂದು ಅಪೂರ್ವ ಸಂಗತಿ. ಇದನ್ನು ಅವರು ತಮ್ಮ ಭಾಗ್ಯವೆಂದೇ ತಿಳಿದರಂತೆ.

ಒಂದು ದಿನ ರಾತ್ರಿ ಅಯ್ಯರ್ ಅವರ ಮಹಡಿಯಲ್ಲಿ ದೊಡ್ಡ ದೊಡ್ಡ ಸಂಗೀತಗಾರರೆಲ್ಲ ಸೇರಿದ್ದರು. ಅಯ್ಯರ್ ಅವರು ತಮಗೆ ಬಹು ಪ್ರಿಯವಾದ ಭೈರವಿಯನ್ನು ಆರಂಭಿಸಿದ್ದರು. ಅದು ಎಷ್ಟು ಹೊತ್ತಾದರೂ ಮುಗಿಯುವಂತಿರಲಿಲ್ಲ. ರಾತ್ರಿ ಊಟದ ಸಮಯ ಮೀರುತ್ತಿತ್ತು. ಊಟ ಮಾಡಿ ಅನಂತರ ಕಚೇರಿಯನ್ನು ಮುಂದುವರಿಸುವಂತೆ ಗುರುಗಳಿಗೆ ಸೂಚನೆ ಕೊಡುವಂತೆ ಗುರುಪತ್ನಿ ಗೌಡರಿಗೆ ಬಿನ್ನೈಸಿಕೊಂಡರಂತೆ. ಗೌಡರಾದರೋ ಹೆದಹೆದರುತ್ತ, ಸಮಯ ಕಾದು ಗುರುಗಳ ಕಿವಿಯಲ್ಲಿ ವಿಷಯವನ್ನು ಹಾಕಿದರಲ್ಲದೆ ಗುರುಗಳು ಊಟ ಮುಗಿಸಿ ಬರುವವರೆಗೆ ತಾವು ಕಚೇರಿ ಮುಂದುವರಿಸುವುದಾಗಿಯೂ ಹೇಳಿದರು. ಈ ಮಾತುಗಳನ್ನು ಕೇಳಿದ ಗುರುಗಳಿಗೆ ಅಸಾಧ್ಯ ಕೋಪ ಬಂದಿತಾದರೂ ಶಿಷ್ಯನನ್ನು ಪರೀಕ್ಷಿಸಿಯೇ ಬಿಡುವ ತೀರ್ಮಾನಕ್ಕೆ ಬಂದು ಶಿಷ್ಯನಿಗೆ ಕಚೇರಿ ವಹಿಸಿ ತಾವು ಊಟಕ್ಕೆ ಎದ್ದರು. ಗೌಡರು ಕಚೇರಿಯನ್ನು ಮುಂದುವರಿಸಿದರು. ಶಿಷ್ಯನ ಕಚೇರಿ ಮುಗಿಯುವ ಹೊತ್ತಿಗೆ ಗುರುಗಳಿಗೆ ಬಹಳ ಸಂತೋಷವಾಗಿತ್ತು. ತಾವು ಹೊದ್ದಿದ್ದ ಜರತಾರಿಯ ಶಾಲನ್ನೇ ತಮ್ಮ ಶಿಷ್ಯನಿಗೆ ಅದೇ ವೇದಿಕೆಯ ಮೇಲೆ ಹೊದಿಸಿ ಸನ್ಮಾನಿಸಿ ಅವನನ್ನು ಅಪ್ಪಿಕೊಂಡರಂತೆ. ಅಲ್ಲಿಂದ ಮುಂದೆ ಗೌಡರಿಗೆ ಕ್ರಮವಾಗಿ ಪಾಠ ಆರಂಭವಾಯಿತು. ಗೌಡರಿಗೆ ಗುರುಕರುಣೆ ಮತ್ತು ಆಶೀರ್ವಾದಗಳು ಸಂಪೂರ್ಣವಾಗಿದ್ದವು. ದೈವದತ್ತವಾಗಿ ಬಂದ ಅಪಾರ ಪ್ರತಿಭೆಯಿತ್ತು. `ಕೆಂಪೇಗೌಡ, ಭೈರವಿಯಲ್ಲಿ ನಿನ್ನ ಮೀರಿಸುವವರು ಮತ್ತೊಬ್ಬರಿಲ್ಲ, ಮತ್ತೆ ಬರಲಾರರು ಎಂದು ಗುರುಗಳೇ ಹೊಗಳಿದ್ದುಂಟು. ಇದರಿಂದ ಎಂದೂ ಕೆಂಪೇಗೌಡರು ಅಹಂಕಾರ ಪಟ್ಟವರಲ್ಲ. ಅವರದು ತುಂಬಾ ಸರಳ ಮತ್ತು ವಿನೀತ ವ್ಯಕ್ತಿತ್ವವೆಂದು ಅವರನ್ನು ಕಂಡವರೆಲ್ಲ ಹೇಳುತ್ತಾರೆ. ಇಷ್ಟಾದರೂ ಅವರ ಜೀವನ ಮಾತ್ರ ಅವರು ಸಂಗೀತದಲ್ಲಿ ಮೇಲೇರಿದಂತೆಲ್ಲ ದುರಂತದತ್ತ ಜರುಗುತ್ತಿದ್ದಂತೆ ಕಂಡುಬರುತ್ತದೆ.

ಗೌಡರು ಆಗಿನ ಕಾಲಪದ್ಧತಿಯಂತೆ ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾಗಿದ್ದರು. ಸಂಗೀತ ಅಭ್ಯಾಸಕ್ಕೆ ಹೊರಡುವ ಕಾಲಕ್ಕೆ ಅವರಿಗೆ ಒಂದು ಗಂಡು ಮಗು ಇತ್ತು. ಗೌಡರು ತಿರುವಾಯೂರಿನಲ್ಲಿ ಸಂಗೀತ ಅಭ್ಯಾಸವನ್ನು ಭರದಿಂದ ನಡೆಸಿದ್ದ ಕಾಲದಲ್ಲಿಯೆ ಅವರ ಪತ್ನಿ ತಮ್ಮ ಏಕಮಾತ್ರ ಪುತ್ರನನ್ನು ಬಿಟ್ಟು ಅಕಾಲ ಮರಣಕ್ಕೆ ತುತ್ತಾದರು. ಈ ಘಟನೆ ಕೆಂಪೇಗೌಡರ ಬದುಕಿನ ಮೇಲೆ ಮಹತ್ತರವಾದ ಪರಿಣಾಮವನ್ನುಂಟುಮಾಡಿತು. ಹೆಂಡತಿಯ ಮುಖ ನೋಡಲು ಕಾತರರಾಗಿ ಊರಿಗೆ ಹಿಂತಿರುಗಿದ ಗೌಡರು ಕೆಲವು ದಿನಗಳ ಕಾಲ ಮಗುವಿನೊಂದಿಗೆ ತಮ್ಮ ಹಳ್ಳಿಯಲ್ಲಿಯೇ ಇದ್ದುಬಿಟ್ಟರು.

ಈ ಹೊತ್ತಿಗಾಗಲೇ ಗೌಡರ ಕೀರ್ತಿ ಕನ್ನಡ ನಾಡಿಗೆಲ್ಲ ಹರಡಿತ್ತು. ಅವರಿಗೆ ಅರಮನೆಯಿಂದ ಆಹ್ವಾನ ಬಂತು. ದುಃಖಭಾರದಲ್ಲಿದ್ದ ಗೌಡರು ಅದನ್ನು ನಿರಾಕರಿಸಲು ಯೋಚಿಸಿದ್ದರಂತೆ. ಆದರೆ ಹಿರಿಯರನೇಕರು ಅರಮನೆಯ ಕರೆಯನ್ನು ನಿರಾಕರಿಸಬಾರದೆಂದೂ ದುಃಖವನ್ನು ಮರೆಯಲು ಮತ್ತು ಸಂಗೀತವನ್ನು ಮತ್ತೂ ಅಭಿವೃದ್ಧಿಪಡಿಸಿಕೊಳ್ಳಲು ಇದೊಂದು ಒಳ್ಳೆಯ ಅವಕಾಶವೆಂದೂ ಒತ್ತಾಯಿಸಿದುದರಿಂದ ಗೌಡರು ಅರಮನೆಯ ಕರೆಯನ್ನು ಒಪ್ಪಿ ಮೈಸೂರಿಗೆ ಬಂದರು. ಪ್ರಭುಗಳ ಎದುರಿಗೆ ಕೆಂಪೇಗೌಡರ ಕಚೇರಿ ನಡೆಯಿತು. ಗೌಡರ ಸಂಗೀತವನ್ನು ಬಹಳವಾಗಿ ಮೆಚ್ಚಿಕೊಂಡ ಪ್ರಭುಗಳು ಅವರನ್ನು ಆಸ್ಥಾನವಿದ್ವಾಂಸರನ್ನಾಗಿ ನೇಮಿಸಿಕೊಂಡು ಸತ್ಕರಿಸಿದರು. ಅರಮನೆಯಲ್ಲಿ ಗೌಡರ ಕೀರ್ತಿ ಬೆಳೆಯತೊಡಗಿತು. ಹಿಂದುಳಿದ ವರ್ಗದವರ ಬಗ್ಗೆ ಅಪಾರ ಕರುಣೆಯಿದ್ದ ಯುವರಾಜ ಕಂಠೀರವ ನರಸರಾಜ ಒಡೆಯರು ಕೆಂಪೇಗೌಡರೇ ಆಸ್ಥಾನದ ಮುಖ್ಯ ವಿದ್ವಾಂಸರಾಗಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದರಂತೆ. ಈ ವಿಚಾರ ಕೇಳಿದ ಅನೇಕ ಪಟ್ಟಭದ್ರ ಹಿತಾಸಕ್ತ ಆಸ್ಥಾನ ವಿದ್ವಾಂಸರು ಗೌಡರ ಬಗ್ಗೆ ಅಸೂಯೆಯ ಕೆಂಡ ಕಾರತೊಡಗಿದರು. ಅಷ್ಟರಲ್ಲಿ ಗೌಡರ ಬದುಕಿನ ಏಕಮಾತ್ರ ಆಶೆಯಾಗಿದ್ದ ಅವರ ಮಗ ತೀರಿಕೊಂಡ. ಅನಂತರ ಗೌಡರ ಬದುಕು ಶೂನ್ಯಮಯವಾಗತೊಡಗಿತು. ಯಾವುದರಲ್ಲಿಯೂ ಆಸಕ್ತಿ ಉಳಿಯಲಿಲ್ಲ. ದುಃಖದ ತೀವ್ರತೆಯನ್ನು ಮರೆಯಲು ಗೌಡರು ಮದ್ಯಪಾನ ಮಾಡತೊಡಗಿದರು.

ಹೀಗೆ ಮನಸ್ಸು ಸಂಪೂರ್ಣವಾಗಿ ಹದಗೆಟ್ಟಿದ್ದಾಗ ಒಂದು ದಿನ ಅರಮನೆಯ ಅತಿಥಿಯಾಗಿ ಬಂದಿದ್ದವರೊಬ್ಬರ ಮುಂದೆ ಗೌಡರು ಹಾಡಬೇಕಾಗಿ ಬಂತು. ಇದನ್ನರಿತ ಅಸೂಯಾಪರರು ನಿರೂಪ ಗೌಡರನ್ನು ಸೇರಿದಂತೆ ಸಂಚು ಹೂಡಿ, ಮಿತ್ರರಂತೆ ನಟಿಸಿ, ಅವರಿಗೆ ಚೆನ್ನಾಗಿ ಕುಡಿಸಿ, ಅನಂತರ ರಾಜನಿರೂಪವನ್ನು ಅವರಿಗೆ ತೋರಿಸಿದರು. ಆದರೂ ಧೈರ್ಯಗುಂದದೆ ಗೌಡರು ಕಚೇರಿಯನ್ನು ಆರಂಭಿಸಿಯೇ ಬಿಟ್ಟರು. ಆದರೆ ಅವರಿಗೆ ಕುಡಿಸಿದ್ದ ಮದ್ಯ ಬಹಳ ಪ್ರಖರವಾದುದರಿಂದ ಹಾಡುಗಾರಿಕೆ ಹಿಡಿತ ತಪ್ಪಿತು. ಇದಕ್ಕೆಲ್ಲ ಕಾರಣವೇನು ಎಂಬುದನ್ನು ತಿಳಿಯುವ ನಿಗೂಢ ವಿವೇಕ ಪ್ರಭುಗಳಿಗಿತ್ತಾಗಿ ಅವರು ಗೌಡರನ್ನು ಅಪಾರ್ಥಮಾಡಿಕೊಳ್ಳಲಿಲ್ಲ. ಈ ಎಲ್ಲ ಘಟನೆಗಳು ಕೆಂಪೇಗೌಡರಲ್ಲಿ ಮಾನವಸ್ವಭಾವದ ಬಗೆಗಿನ ನಂಬಿಕೆಯನ್ನೇ ಅಳಿಸಿಹಾಕಿದವೆಂದು ತೋರುತ್ತದೆ. ಅವರು ಮುಂದೆ ಮನುಷ್ಯರ ಮುಂದೆ ಹಾಡುವುದಿಲ್ಲ ಎಂದು ಶಪಥ ಮಾಡಿ, ಅರಮನೆಯ ತಮ್ಮ ಪದವಿ ತ್ಯಜಿಸಿ ದೇಶಾಂತರ ಹೊರಟರೆಂದು ತಿಳಿದುಬರುತ್ತದೆ. ಅವರಿಗೆ ಹಾಡಬೇಕೆನಿಸಿದರೆ ಯಾವುದಾದರೂ ದೇವಾಲಯದಲ್ಲಿ ದೇವರ ಎದುರಿಗೆ ಕುಳಿತು ಹಾಡುತ್ತಿದ್ದರಂತೆ. ಕೆಲವು ಸಾರಿ ಆಪ್ತರೆಂದು ತಿಳಿದವರ ಎದುರಿಗೆ ಮಾತ್ರ ಹಾಡಿದ್ದುಂಟು. ಇಂಥ ಒಂದು ಸಂದರ್ಭದಲ್ಲಿಯೇ ಡಿ.ವಿ.ಗುಂಡಪ್ಪನವರು ಅವರ ಸಂಗೀತ ಕೇಳಿ ಪ್ರಶಂಸೆಯ ಮಾತುಗಳನ್ನಾಡಿದರಂತೆ.

ಆ ಕಾಲದಲ್ಲಿ ಶ್ರೀಮಂತ ರಸಿಕರು ಗೌಡರ ಭೈರವಿಯನ್ನು ಒತ್ತೆಯಿಟ್ಟುಕೊಂಡು ಸಾವಿರಾರು ರೂಪಾಯಿ ಸಾಲ ಕೊಡುತ್ತಿದ್ದರಂತೆ. ಒಮ್ಮೆ ಬಡವನೊಬ್ಬನಿಗೆ ಸಹಾಯ ಮಾಡಲು ಗೌಡರು ಸೇಲುಮಿನ ಚಿಟ್ಟಿಯಾರ್ ಒಬ್ಬನಲ್ಲಿ ಮೂರು ಸಾವಿರ ರೂಪಾಯಿ ಸಾಲ ಮಾಡಿದರಂತೆ. ಅದೇ ಸಮಯದಲ್ಲಿ ಕಂಚಿಯಲ್ಲಿ ಅವರು ಹಾಡುತ್ತಿದ್ದ ಕಚೇರಿಯೊಂದರಲ್ಲಿ ಭೈರವಿ ಹಾಡುವಂತೆ ಕೋರಿಕೆ ಬಂದಾಗ ತಾವು ಏಕೆ ಅದನ್ನು ಹಾಡುವುದಿಲ್ಲವೆಂಬ ನಿಜಸಂಗತಿಯನ್ನು ಸಭೆಗೆ ತಿಳಿಸಲಾಗಿ ಸಾಹುಕಾರರೊಬ್ಬರು ಮೂರು ಸಾವಿರ ತಂದು ದೇವರೆದುರಿಗಿಟ್ಟು ಭೈರವಿ ಹಾಡುವಂತೆ ಪ್ರಾರ್ಥಿಸಿದರಂತೆ. ಗೌಡರು ಆ ಹಣವನ್ನು ಸೇಲಂ ಚೆಟ್ಟಿಯಾರರಿಗೆ ಮನಿಆರ್ಡರ್ ಮಾಡಿಸಿ ಭೈರವಿ ಹಾಡಿ ಸಭಿಕರನ್ನು ಸಂತುಷ್ಟಿಗೊಳಿಸಿದರಂತೆ. ಕೆಂಪೇಗೌಡರ ಬಗ್ಗೆ ಇಂಥ ಅನೇಕ ಘಟನೆಗಳ ಉಲ್ಲೇಖವಿದೆ.

ಅರಮನೆಯನ್ನು ಬಿಟ್ಟು ಹೊರಟ ಕೆಂಪೇಗೌಡರು ಮೈಸೂರು ಮತ್ತು ತಮಿಳುನಾಡಿನ ಅನೇಕ ಕಡೆ ಸುತ್ತಿದರೆಂದು ತಿಳಿದುಬರುತ್ತದೆ. ಕಾಲಕಾಲಕ್ಕೆ ಊಟ ನಿದ್ರೆಗಳಿಲ್ಲದೆ ಅಲೆದುದರಿಂದ ಅವರ ದೇಹಶಕ್ತಿ ಕುಂದುತ್ತ ಬಂತು. ಇದರ ಜೊತೆಗೆ ಅಪಾರವಾದ ಮದ್ಯಸೇವನೆಯೂ ಅವರ ಆಯುಷ್ಯವನ್ನು ಕ್ಷೀಣಿಸುತ್ತಿತ್ತು. ಅಂಥ ಕಾಲದಲ್ಲಿ ಕನ್ನಡ ನಾಡಿನ ಮುಖಂಡರಲ್ಲೊಬ್ಬರಾದ ಎಚ್.ಕೆ.ವೀರಣ್ಣಗೌಡರು ಕೆಂಪೇಗೌಡರನ್ನು ಬಹಳ ಒತ್ತಾಯ ಮಾಡಿ ತಮ್ಮ ಜೊತೆಯಲ್ಲಿರಿಸಿಕೊಂಡಿದ್ದರಂತೆ. ಚನ್ನಪಟ್ಟಣದಲ್ಲಿದ್ದ ವೀರಣ್ಣಗೌಡರ ಕೊಟಡಿಯಲ್ಲಿ ಗೌಡರು ಐದಾರು ತಿಂಗಳಿದ್ದರಂತೆ.

ಸ್ವಾಮಿ ವಿವೇಕಾನಂದರು ಪರವ್ರಾಜಕರಾಗಿ ಅಸ್ಸಾಮಿನ ಗಿರಿ ಕಂದರಗಳಲ್ಲಿ ಪ್ರವಾಸ ಮಾಡುತ್ತಿದ್ದಾಗ ಕೆಂಪೇಗೌಡರು ಅವರೊಂದಿಗೆ ಕೆಲವು ಕಾಲ ಸಂಚಾರ ಮಾಡುತ್ತ ತಮ್ಮ ಸಂಗೀತ ಸುಧೆಯಿಂದ ಸ್ವಾಮಿಜಿಯವರನ್ನು ತೃಪ್ತಿಪಡಿಸಿದರಂತೆ. ಅದರ ನೆನಪಾಗಿ ವಿವೇಕಾನಂದರು ಗೌಡರಿಗೆ ತಮ್ಮ ನಿಲುವಂಗಿಯೊಂದನ್ನು ದಯಪಾಲಿಸಿದರೆಂದೂ ಗೌಡರು ಅದನ್ನು ಕಡೆಯವರೆಗೂ ಪೂಜ್ಯಭಾವನೆಯಿಂದ ತಮ್ಮ ಬಳಿ ಇಟ್ಟುಕೊಂಡಿದ್ದರೆಂದೂ ಪ್ರತೀತಿ.

`ಗೌಡರು ಘನ ವಿದ್ವಾಂಸರು; ಎಂದೂ ಯಾವ ಹಂಗಿಗೂ ಒಳಪಟ್ಟವರಲ್ಲ. ಎತ್ತರದ ಆಳು. ತೇಜಸ್ವಿಯಾದ ಮುಖ. ಅವರು ಕೆಲವು ಕಾಲ ನನ್ನ ಜೊತೆಗಿದ್ದು ನನ್ನ ಅಲ್ಪ ಸೇವೆ ಸ್ವೀಕರಿಸಿದ್ದು ನನ್ನ ಪುಣ್ಯ-ಎಂದು ವೀರಣ್ಣಗೌಡರು ಕೃತಜ್ಞತಾಪೂರ್ವಕವಾಗಿ ಕೆಂಪೇಗೌಡರನ್ನು ನೆನೆದಿದ್ದಾರೆ. ಚನ್ನಪಟ್ಟಣಕ್ಕೆ ಬರುವ ಹೊತ್ತಿಗೆ ಗೌಡರಿಗೆ ಹಲ್ಲು ಬಿದ್ದುಹೋಗಿದ್ದುವಂತೆ. ಹಲ್ಲು ಕಟ್ಟಿಸಿಕೊಳ್ಳುವಂತೆ ಅನೇಕರು ಒತ್ತಾಯಿಸಿದರೂ ಅವರು ಒಪ್ಪುತ್ತಿರಲಿಲ್ಲವಂತೆ. ಕಡೆಗೆ ವೀರಣ್ಣ ಗೌಡರ ಒತ್ತಾಯಕ್ಕೆ ಮಣಿದು ಆ ಬಗ್ಗೆ ಅವರು ಕೊಟ್ಟ ಹಣವನ್ನು ತೆಗೆದುಕೊಂಡು ಗೌಡರು ಬೆಂಗಳೂರು ರೈಲು ಹತ್ತಿದರು. ಆದರೆ ಮತ್ತೆ ಚನ್ನಪಟ್ಟಣಕ್ಕೆ ಹಿಂತಿರುಗಲಿಲ್ಲ. ಅವರಿಗಾಗಿ ವೀರಣ್ಣಗೌಡರು ಬೆಂಗಳೂರೆಲ್ಲ ಅಲೆದರಂತೆ. ಆದರೆ ಹಿಂತಿರುಗಲಿಲ್ಲ. ಅವರಿಗಾಗಿ ವೀರಣ್ಣಗೌಡರು ಬೆಂಗಳೂರೆಲ್ಲ ಅಲೆದರಂತೆ. ಆದರೆ ಯಾವ ಪ್ರಯೋಜನವೂ ಆಗಲಿಲ್ಲ. ಮತ್ತೆ ಅವರನ್ನು ಕಂಡವರೆ ಯಾರೂ ಇಲ್ಲ.       		
    (ಎಚ್.ಕೆ.ಆರ್.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ